ಪ್ರಸ್ತಾವನೆ

ನಮಸ್ಕಾರ, ನನ್ನ ಹೆಸರು ಚಂದ್ರಶೇಖರ್ ವಿಟ್ಟಸಂದ್ರ. ವಯಸ್ಸು ಎಪ್ಪತ್ತು ಮುಗಿದು ಎಪ್ಪತ್ತೊಂದು. ಶೇಖರ್ ಪೂರ್ಣ ಅನ್ನೋ ಹೆಸರಲ್ಲಿ ಸ್ನೇಹಿತರ ವಲಯದಲ್ಲಿ ಹೆಚ್ಚಾಗಿ ನಾನು ಚಿರಪರಿಚಿತ. ಹಾಗೆಯೇ ಶೇಖರ್ ಪೂರ್ಣ ಅನ್ನೋ ಹೆಸರಲ್ಲೇ ನನ್ನ ಒಂದಷ್ಟು ಬರವಣಿಗೆ, ಪ್ರಸ್ತಾವನೆ

ಪ್ರಜಾವಾಣಿಯಲ್ಲಿ ಪ್ರೂಫ್ ರೀಡರ್ ಆಗಿ 1978 ರಲ್ಲೆ ಉದ್ಯೋಗ ದೊರೆತನಂತರ, ನನಗೆ ಕ್ರಮೇಣ ಇನ್ ಫರ್ಮೇಶನ್ ಅಸಿಸ್ಟೆಂಟ್ ಆಗಿ ಬಡ್ತಿ ಸಿಕ್ತು. ಅಂದ್ರೆ, ಪತ್ರಕರ್ತನಾಗಿ ಸುಮಾರು 1978 ರಿಂದ 2011 ರವರೆಗೆ 33 ವರ್ಷಗಳ ಕಾಲ ಕಾರ್ಯನಿರತ ಪತ್ರಕರ್ತನಾಗಿದ್ದೆ. ಈ ಮಧ್ಯೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಭಾರತೀಯ ಪತ್ರಕರ್ತ ಸಂಘದಲ್ಲಿ ಪದಾಧಿಕಾರಿಯಾಗಿ, ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿ ಪತ್ರಕರ್ತರ ಸಂಘದಲ್ಲಿ ಆರೇಳು ವರ್ಷಗಳು ಅಧ್ಯಕ್ಷನ್ನಾಗಿದ್ದೂ ಉಂಟು.

ಹೀಗಾಗಿ ಪತ್ರಿಕೋದ್ಯಮದಲ್ಲಿ ಸುಮಾರು 1981 ರಲ್ಲಿ ಮುದ್ರಣಾಲಯಕೆ ಪ್ರವೇಶಿಸಿದ ಆಧುನಿಕ ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ, ನೇರ ಅನುಭವವಾಗಲಿ, ಪರಿಚಯವಾಗಲಿ ಇಲ್ಲದಿದ್ದರೂ - ಸಂಪಾದಕೀಯ ವಿಭಾಗಕ್ಕೆ ಪ್ರವೇಶಿಸಿದ ಕಂಪ್ಯೂಟರ್ಗಳು ಸಾಫ್ಟ್ವೇರ್ ಗಳು ಇತ್ಯಾದಿಗಳನ್ನು ಬಲ್ಲೆ. ಪ್ರೂಫ್ ರೀಡರ್ ಗಳು ಕಂಪ್ಯೂಟರ್ ಗಳನ್ನು ಮುಟ್ಟಬಾರದು ಎಂಬಂತಹ ಮೌಖಿಕ ನಿಷೇಧವಿದ್ದೇ ಇತ್ತು.

ಕನ್ನಡ ಸಾಹಿತ್ಯ ಡಾಟ್ ಕಾಮ್ ಎಂದನ್ನುವ ಒಂದು ವೆಬ್‌ಸೈಟನ್ನು ಆರಂಭಿಸಿ, ಅದರಲ್ಲಿ ಕನ್ನಡ ಸಾಹಿತ್ಯದ ಪ್ರಮುಖ ಸಾಹಿತಿಗಳ ಲಿಖಿತ ಅನುಮತಿಯೊಂದಿಗೆ , ಸಾಕಷ್ಟು ಕೃತಿಗಳನ್ನು ಸೈಬರ್ ಸ್ಪೇಸ್‌ನಲ್ಲಿ ಅಳವಡಿಸುವಿಕೆ ಕಾರ್ಯಕ್ಕೆ ನೆರವಾದವರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ ಗರ್ವ ಉಂಟು. ಕನ್ನಡ ಸಾಹಿತ್ಯ ಡಾಟ್ ಕಾಮ್ ನೆರವಿಗೆ, ಅಪಾರವಾದ ಬೆಂಬಲಿಗರ ಬಳಗ ಕೂಡ ಸೇರಿತ್ತು. ಈಗ ನನ್ನ ಸ್ನೇಹಿತನಾದ ಕಿಶೋರ್ ನಿರ್ವಹಣೆ ಕಾರ್ಯ ಹೊತ್ತಿದ್ದಾರೆ.

ಸೈಬರ್ ಸ್ಪೇಸ್‌ನಲ್ಲಿ ನಾನು ಕನ್ನಡ ಸಾಹಿತ್ಯ ಡಾಟ್ ಕಾಮ್ ಅನ್ನು ಆರಂಭಿಸಬೇಕು ಎಂದಂದು ಕೊಂಡಿದ್ದ ಉದ್ದೇಶ ಇಲ್ಲಿ ಪ್ರಸ್ತಾ ಸುತ್ತಿದ್ದೇನೆ . ಇಡೀ ಸೈಬರ್ ಸ್ಪೇಸ್ ಈಗ ಇಂಗ್ಲಿಷ್ ಮಯವಾಗಿದೆ. ಅದರಲ್ಲಿ ತೃತೀಯ ಜಗತ್ತಿನ ಭಾಷೆಗಳ ಅಳವಡಿಕೆ, ಭಾಷೆಗಳ ಪ್ರಾತಿನಿಧ್ಯ ಸಿಗುವುದೇ ಇಲ್ಲ ಎಂಬುವಷ್ಟು ವ್ಯಾಪಕವಾದ, ಇಂಗ್ಲಿಷ್ ಬೆಳವಣಿಗೆ ಆಕ್ರಮಣಕಾರಿಯಾಗಿದೆ ಕಲೋನಿಯುಲೈಸ್ ಮಾಡಿಕೊಂಡಿದೆ. ಹಾಗಾದ್ರೆ ನಮ್ಮದು ಏನು ಇಲ್ಲವಾ? ನಾವೇನು ಹೇಳಿಕೊಳ್ಳುವಂತದ್ದು ಯಾವುದೂ ಇಲ್ವಾ? ಇಲ್ಲಿದೆ ನೋಡಿ ಅಂತ ಹೇಳಿ ಆರಂಭಿಸಿದ್ದೆ. ಗರ್ವ ಅಹಂಕಾರ ತುಂಬಿದ ಹೆಗ್ಗಳಿಕೆಯು ಸಹ ನನ್ನದಾಗಿತ್ತು.

ವಯಸ್ಸಾಗುತ್ತಾ ನನ್ನ ಗಮನ ಕನ್ನಡ ಸಾಹಿತ್ಯ ಡಾಟ್ ಕಾಮ್ ಕಡೆ ಸ್ವಲ್ಪ ಕಡಿಮೆಯಾಗುತ್ತಿದ್ದರು ಹಾಗೂ ಚದುರಿಹೋದ ಬಳಗದ ಗಮನ ಕೂಡ ಕಡಿಮೆಯಾಗುತ್ತಿದ್ದರು ಈಗ ಅದು ಕಿಶೋರ್ ಚಂದ್ರ ಅನ್ನುವಂತಹ ಯುವ ಸ್ನೇಹಿತನೊಬ್ಬನ ಮುತುವರ್ಜಿಯಿಂದ ಮುಂದುವರಿಯುತ್ತಾ ಬಂದಿದೆ.

ಈಗ ಸೈಬರ್ ಸ್ಪೇಸ್ ಎಂಬುದು ಬರಿ ಪಠ್ಯ ರೂಪಕ್ಕೆ ಮಾತ್ರ ಸೀಮಿತವಾಗಿಲ್ಲ. ಅನೇಕಾನೇಕ ಲಕ್ಷಾಂತರ ಕೋಟ್ಯಾಂತರ ದೃಶ್ಯ ಮಾಧ್ಯಮಗಳನ್ನು ಆಕ್ರಮಿಸಿ ಕೂತಿದೆ. ನಾನು kannadasahithya.com ಆರಂಭಿಸಿದಾಗ ಬರವಣಿಗೆ ಅನ್ನೋ ಹೆಸರಲ್ಲಿ ಅಸಂಖ್ಯಾತ ಸಾಹಿತ್ಯದ ಪುಟಗಳು ಇದ್ದವು. ಅವನ್ನು ವಿಮರ್ಶೆಯ ಮೂಲಕ ಗಂಭೀರವಾಗಿ ನೋಡಿದರೆ ಸಾಹಿತ್ಯದ ಅಸಲು ಫಸಲು ತುಂಬಾ ಕಡಿಮೆ ಇತ್ತು. ಇದ್ದವನ್ನು ಆರಿಸಿ ಪೇರಿಸಿ ಕಾಪಿಟ್ಟುಕೊಳ್ಳುವ ವ್ಯಾಪಕಗೊಳಿಸುವ ಪಂಥಗಳಷ್ಟು ಚರ್ಚೆಯನ್ನು ಹುಟ್ಟು ಹಾಕಿದವು.

ಬಹಳಷ್ಟು ಜನರು ಡಾಲಿ ಎಂಬ ಹೆಸರನ್ನು ಕೇಳಿಯೇ ಇರುತ್ತಾರೆ. ಡಾಲಿ ಎಂದೊಡನೆ ಈಗ ಕನ್ನಡ ಚಿತ್ರ ನಟನೆ ಆಗಬೇಕೆಂದಿಲ್ಲ. ಅದೊಂದು ಕುರಿ. ಈ ಕುರಿ ಹುಟ್ಟಿದೊಡನೆ, ತನ್ನ ಜನನದೊಂದಿಗೆ ವಿಶ್ವದಾದ್ಯಂತ ಕ್ರಾಂತಿಕಾರಿ ಚರ್ಚೆಯನ್ನು ಹುಟ್ಟು ಹಾಕಿ ಬಿಟ್ಟಿತು. ಕ್ಲೋನಿಂಗ್. ಯಥಾವತ್ ಜೈವಿಕವಾದ ನಕಲನ್ನು ಹುಟ್ಟು ಹಾಕಬಹುದು ಎಂಬ ಸಾಧ್ಯತೆಯನ್ನು ವೈಜ್ಞಾನಿಕ ಜಗತ್ತಿನ ಸಂಶೋಧನೆ ತಟಕ್ಕನೆ ಜನ ಸಮುದಾಯದ ಮುಂದೆ ತಂದು ನಿಲ್ಲಿಸಿ ಬಿಟ್ಟಿತ್ತು. ಕುರಿ ಒಂದರ ಜೈವಿಕ ನಕಲನ್ನು ಪರೀಕ್ಷಾರ್ಥಕವಾಗಿ ಕ್ಲೋನಿಂಗ್ ತನ್ನೊಡನೆ ಪ್ರತ್ಯಕ್ಷಗೊಳಿಸಿ ಬಿಟ್ಟಾಗ ಜಗತ್ತಿನ ಜನ ಸಮುದಾಯದಲ್ಲಿ ದೊಡ್ಡದೊಂದು ಹಾಹಾಕಾರ. ಚರ್ಚೆ, ವಿವಾದ. ಕ್ಲೋನಿಂಗನ್ನು ನಿಯಂತ್ರಿಸಬೇಕೆಂಬ ಸಲಹೆಯೂ ಸಹ ಮುನ್ನೆಲೆಗೆ ಬಂದದ್ದು ಉಂಟು. ಹೆಚ್ಚೂ ಕಡಿಮೆ, ಈಗ ಎ ಐ ಎಂಬ ಕೃತಕ ಬುದ್ಧಿಮತ್ತೆಯ ಆಕ್ರಮಣವಾಗತೊಡಗಿದೆ. ಪರಿಣಾಮವಾಗಿ ವೈದ್ಯಕೀಯ ವಿಜ್ಞಾನ ನ್ಯಾಯಾಂಗ, ಕಲೆ, ಸಿನಿಮಾ, ಸಂಗೀತ, ವ್ಯಾಪಾರದ ಯೋಜನೆಗಳು, ಉದ್ಯೋಗ ವ್ಯವಸ್ಥೆ ಇತ್ಯಾದಿ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಸಹ ತಂದೊಡ್ಡಿದೆ. ಎ ಐ ಇನ್ನೂ ಬಾಲ್ಯಾವಸ್ಥೆಯಲ್ಲಿ ಇದೆ, ಅದನ್ನು ಬದುಕಿಗೆ ಅನುಕೂಲಕಾರಿಯಾಗಿ ಬಳಸುವ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯಗಳು ಸಹ ಮುನ್ನೆಲೆಗೆ ಬರುತ್ತಿರುತ್ತವೆ. ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು, ಈ ಕುರಿತಂತೆ ವೇದಿಕೆಯೊಂದರಲ್ಲಿ ಪ್ರಸ್ತಾವಿಸಿದ ನೆನಪು ಸಹ ಉಂಟು. ಮುಖ್ಯ ನ್ಯಾಯಾಧೀಶರು ಮಾತ್ರವಲ್ಲದೆ, ಈ ಕುರಿತಂತೆ ಅನೇಕ ಪ್ರಮುಖ ನ್ಯಾಯಾಧೀಶರು ಸಹ ಪ್ರಸ್ತಾಪಿಸಿದ್ದು ಉಂಟು.

ಎ ಐ ಕುರಿತಂತೆ ಮೇಲೆ ಹೇಳಿರುವುದು ಕೇವಲ ವಿಷಯಾನುಸಂಧಾನಕ್ಕಾಗಿ ಮಾತ್ರ. ಸಂಕ್ಷಿಪ್ತ ಮಾತ್ರ. ಈ ಸಂಕ್ಷಿಪ್ತದಲ್ಲಿ ಎಷ್ಟೊಂದು ಕಳವಳ. ಕಳವಳಕಾರಿ ಎಂದರೆ ಈ ಕುರಿತಂತೆ ಹೆಚ್ಚಿನ ಮಟ್ಟದಲ್ಲಿ ಚರ್ಚೆಯಾಗದಿರುವುದು ಮತ್ತು ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿಯವರ ತೀರಾ ತೆಳುವಾದ, ಆದರೂ ಗಮನಾರ್ಹವಾದ ಮಾತುಗಳು, ಭಾರತ ಸರ್ಕಾರದ ಪರವಾಗಿ ಒಂದಿಬ್ಬರು ಸಚಿವರ ಮಾತುಗಳು ಇತ್ತೀಚಿನ ಲೋಕಸಭೆಯ ಕಲಾಪದಲ್ಲಿ ಕೇಳಿ ಬಂದು ಆ ಕಲಾಪಕ್ಕೆ ಮಾತ್ರ ಆ ಮಾತುಗಳು, ಚರ್ಚೆ ಮುಗಿದು ಹೋದ<,ದ್ದು ನಮ್ಮ ದುರಂತ. ರಿಲಯನ್ಸ್ ಸಂಸ್ಥೆ ಲಕ್ಷಾಂತರ ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡುವಂತಹ ಪ್ರಸ್ತಾವನೆಯ ಕುರಿತಂತೆ ದಿನಪತ್ರಿಕೆಗಳು ವರದಿಯನ್ನು ಸಹ ಇಲ್ಲಿ ಗಮನಕ್ಕೆ ತೆಗೆದುಕೊಳ್ಳಬಹುದು.


ಇದರೊಂದಿಗೆ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಕಾನೂನು - ನಿಯಮಾವಳಿಗಳ ನಿಯಂತ್ರಣದ ಕುರಿತಂತೆ ಯಾವುದೇ ದಿಕ್ಸೂಚಿ ಕಂಡುಬಂದಿಲ್ಲ. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಗಮನ ಸೆಳೆದಾಗ "ಆಲೋಚಿಸುತ್ತಿದ್ದೇವೆ" ಎಂಬ ಪ್ರಮಾಣ ಪತ್ರ ಅಫಿಡವಿಟ್ ಒಂದನ್ನು ಸುಪ್ರೀಂ ಕೋರ್ಟ್ ಕಲಾಪಕ್ಕೆ ಒಗೆದು ಭಾರತ ಸರ್ಕಾರ ಮೌನ ವಹಿಸಿದೆ.

ಈ ಎಲ್ಲದರ ಹಿನ್ನೆಲೆಯಲ್ಲಿ ಗಂಭೀರ ಚಿಂತನೆಯ ಅಗತ್ಯ ಕಂಡು ಬಂದಿರುವುದರಿಂದ ಪ್ರಾಮಾಣಿಕ ಚಿಂತನೆಗಾಗಿ ಒಂದು ವೇದಿಕೆಯನ್ನು ಹುಟ್ಟು ಹಾಕಬೇಕೆಂಬ ಸದುದ್ದೇಶದಿಂದ "ಇಬ್ಬಂದಿ" ಎಂಬ ಈ ಚಾನಲ್ ಅನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಇದಕ್ಕೆ ಕನ್ನಡ ಸಾಹಿತ್ಯ ಡಾಟ್ ಕಾಮ್ ಜೊತೆಗೆ ನಿಂತಂತಹ ಎಲ್ಲರ ಹಾಗೂ ಸಮುದಾಯದ ಇತರ ಗಣ್ಯರ ಬೆಂಬಲಕ್ಕಾಗಿ ಮನವಿ ಮಾಡಿಕೊಳ್ಳುತ್ತಾ ಈ ಸಂಕ್ಷಿಪ್ತವನ್ನು ಕೊನೆಗಾಣಿಸುತ್ತಿದ್ದೇನೆ.

ಮುಂದಿನ ಸಂಚಿಕೆಯಲ್ಲಿ ಭೇಟಿಯಾಗುತ್ತೇನೆ. ಧನ್ಯವಾದಗಳು.
ಈಗ ಒಂದೆರಡು ಹಾಡುಗಳನ್ನು, ನನ್ನದೇ ಸಾಲುಗಳೊಂದಿಗೆ ಏ ಐ ಬಳಸಿ ನಿಮ್ಮ ಮುಂದೆ ಇಟ್ಟಿದ್ದೇನೆ. ಸುಮಾರಾಗಿಯಾದರೂ ಇದೆ ಎಂಬುದು ನನ್ನ ನಂಬಿಕೆ. ಕೇಳಿನೋಡಿ. ನಿಮ್ಮ ಅಭಿಪ್ರಾಯಗಳನ್ನು ಕೆಳಗೆ ಕಾಮೆಂಟ್ ವಿಭಾಗದಲ್ಲಿ ಚರ್ಚೆಗೆ ಕೈಗೆತ್ತಿಕೊಂಡರೆ ಉಪಕಾರವಾಗುತ್ತದೆ.